ನಾಹಾಸ್ ಪಾಷಾ, ಮುಸ್ತಾಫಾ ಆನ್
1876-1965. ಈಜಿಪ್ಟಿನ ಒಬ್ಬ ರಾಜಕಾರಣಿ. 1876ರ ಜೂನ್ 15ರಂದು ಕೈರೋದಲ್ಲಿ ಹುಟ್ಟಿದ. 1952ರ ಕ್ರಾಂತಿಯವರೆಗೆ ಪ್ರಭಾವಶಾಲಿಯಾಗಿದ್ದ ವ್ಯಕ್ತಿ. ನ್ಯಾಯವಾದಿಯ ವೃತ್ತಿಯಲ್ಲಿ ತೊಡಗಿದ್ದ ಈತ 1904ರಲ್ಲಿ ನ್ಯಾಯಮೂರ್ತಿಯಾಗಿ ನೇಮಕ ಹೊಂದಿದ. ಒಂದನೆಯ ಮಹಾಯುದ್ಧವಾದ ಮೇಲೆ ಹೊಸದಾಗಿ ಆರಂಭವಾಗಿದ್ದ ವಾಫ್ದ್ ಪಕ್ಷದ ಸದಸ್ಯನಾದ. ಅದರ ನಾಯಕನಾಗಿದ್ದ ಜಾಗ್ಲೂಲ್ ಷಾಷಾ 1927ರಲ್ಲಿ ತೀರಿಕೊಂಡಾಗ ನಾಹಾಸ್ ಪಾಷಾನಿಗೆ ನಾಯಕತ್ವ ಪ್ರಾಪ್ತವಾಯಿತು. 1928ರಲ್ಲಿ ಈತ ಪ್ರಧಾನ ಮಂತ್ರಿಯಾದ. ಆದರೆ ಈತನ ಸಂವಿಧಾನಾತ್ಮಕ ಆಡಳಿತ ದೊರೆ ಫುವಾದನಿಗೆ ಸಹಿಸಲಿಲ್ಲ. ವಾಫ್ದ್ ಪಕ್ಷದ ತೀವ್ರವಾದಿಗಳ ಒತ್ತಡದಿಂದಾಗಿ ಈತ ಜಾರಿಗೆ ತಂದ ವಿಧೇಯಕದಿಂದ ಬ್ರಿಟಿಷ್ ಹೈಕಮಿಷರನಿಗೂ ಕೋಪ ಬಂತು. ಆದ್ದರಿಂದ ದೊರೆ ಇವನನ್ನು ವಜಾಮಾಡಿದ. 1929ರಲ್ಲಿ ಈತ ಮತ್ತೆ ಅಧಿಕಾರಕ್ಕೆ ಬಂದು 1930ರವರೆಗೂ ಅಧಿಕಾರದಲ್ಲಿದ್ದ. ದೊಯ ಅಧಿಕಾರವನ್ನು ಮೊಟಕುಗೊಳಿಸುವ ವಿಧೇಯಕವನ್ನು ಈತ ಮಂಡಿಸಿದಾಗ ದೊರೆ ಅದಕ್ಕೆ ಸಮ್ಮತಿ ನೀಡಲಿಲ್ಲ. ಈತ ರಾಜೀನಾಮೆ ನೀಡಿದ. 1936ರ ಮೇನಲ್ಲಿ ಇವನು ಮತ್ತೆ ಪ್ರಧಾನ ಮಂತ್ರಿಯಾದ. ಆ ಸಮಯದಲ್ಲಿ ಈತಿಯೋಪಿಯದ ಮೇಲೆ ಇಟಲಿ ಆಕ್ರಮಣ ನಡಸಿತು. ಬ್ರಿಟನ್-ಈಜಿಪ್ಟ್‍ಗಳ ನಡುವೆ ಸಹಕಾರದ ಸಂಧಾನ ನಡೆಸಲು ಇವನು ಈಜಿಪ್ಟಿನ ನಿಯೋಗದ ನಾಯಕನಾಗಿ ಲಂಡನ್ನಿಗೆ ಭೇಟಿ ನೀಡಿ, ಆ ಬಗ್ಗೆ ಕರಾರಿಗೆ ಸಹಿ ಹಾಕಿದ. 1936ರ ಏಪ್ರಿಲ್‍ನಲ್ಲಿ ದೊರೆ 1ನೆಯ ಫುವಾದ್ ತೀರಿಕೊಂಡ. ಆದರೆ, ರಾಜವರ್ಗ ಮತ್ತು ವಾಫ್ದ್ ಪಕ್ಷಗಳ ನಡುವೆ ತಿಕ್ಕಾಟ ಮುಂದುವರಿಯಿತು. ಸರ್ಕಾರವನ್ನು ದೊರೆ ಫರೂಕ್ ವಜಾ ಮಾಡಿದ. ವಿಧಾನಸಭೆಯ ವಿಸರ್ಜನೆಯಾಯಿತು. 1939ರಲ್ಲಿ ವಾಫ್ದ್ ಪಕ್ಷದ ಕೆಲವರು ಸೇರಿ ಸಾದಿಸ್ಟ್ ಪಕ್ಷ ಕಟ್ಟಿದರು. ಬ್ರಿಟಿಷರ ಒತ್ತಾಯದಿಂದ ದೊರೆ ಫರೂಕ್ 1942ರಲ್ಲಿ ನಾಹಾಸನನ್ನು ಪ್ರಧಾನಿಯಾಗಿ ನೇಮಿಸಿದ. 1942ರ ಮಾರ್ಚಿಯಲ್ಲಿ ನಡೆದ ಚುನಾವಣೆಗಳು ವಾಫ್ದ್ ಪಕ್ಷಕ್ಕೆ ಬಹುಮತ ದೊರಕಿಸಿಕೊಟ್ಟುವು. 1944ರ ಅಕ್ಟೋಬರ್‍ನಲ್ಲಿ ನಾಹಾಸ್ ಅಲೆಗ್ಸಾಂಡ್ರಿಯದಲ್ಲಿ ನಡೆದ ಅರಬ್ ರಾಜ್ಯಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿದ. ಇದರ ಪರಿಣಾಮವಾಗಿ ಅರಬ್ ಒಕ್ಕೂಟ ಅಸ್ತಿತ್ವಕ್ಕೆ ಬಂತು. ಕೈರೋಗೆ ಹಿಂದಿರುಗಿದ ಈತನನ್ನು ದೊರೆ ಹಠಾತ್ತಾಗಿ ವಜಾ ಮಾಡಿದ.

    ಇದಕ್ಕೆ ವಿರುದ್ಧವಾಗಿ 1936ರ ಒಪ್ಪಂದವನ್ನು ಪರಿಷ್ಕರಿಸುವಂತೆ ಹಾಗೂ ಬ್ರಿಟನ್ನಿನಿಂದ ಹೆಚ್ಚಿನ ಸ್ವಾತಂತ್ರ್ಯ ಪಡೆಯಲು ನಾಹಾಸ್ ಮತ್ತು ವಾಫ್ಟ್ ಪಕ್ಷದಿಂದ ಒತ್ತಾಯ ಬಂತು. 1949ರ ವೇಳೆಗೆ ದೊರೆ ಫರೂಕ್ ಜನಪ್ರಿಯತೆ ಕಳೆದುಕೊಂಡಿದ್ದ. ನಾಹಾಸನ ನಾಯಕತ್ವದಲ್ಲಿ ರಾಜವರ್ಗ ಮತ್ತು ವಾಫ್ದ್ ಪಕ್ಷಗಳು ಒಂದುಗೂಡುವ ಸೂಚನೆಗಳು ಕಂಡುಬಂದವು. ನಾಹಾಸ್ ಮತ್ತೆ ಅಧಿಕಾರಕ್ಕೆ ಬಂದ. ಬ್ರಿಟನ್-ಈಜಿಪ್ಟ್ ಸಂಬಂಧ ಹದಗೆಟ್ಟಿತು. 1926 ಒಪ್ಪಂದವನ್ನು ಏಕಪಕ್ಷೀಯವಾಗಿ ನಿರಾಕರಿಸಲು ಹಾಗೂ ಫರೂಕನನ್ನು ಈಜಿಪ್ಟ್ ಮತ್ತು ಸೂಡಾನಿನ ದೊರೆಯಾಗಿ ಘೋಷಿಸಲು ನಾಹಾಸ್ 1951ರ ಅಕ್ಟೋಬರಿನಲ್ಲಿ, ಕರೆ ನೀಡಿದ. 1952ರ ಜನವರಿಯಲ್ಲಿ ನಾಹಾಸನನ್ನು ದೊರೆ ವಜಾ ಮಾಡಿದ. ಇದರ ಪರಿಣಾಮವಾಗಿ ಕೈರೋದಲ್ಲಿ ತುಂಬ ಅವ್ಯವಸ್ಥೆ ಉಂಟಾಯಿತು. 1952ರ ಜುಲೈನಲ್ಲಿ ಸೇನೆ ದಂಗೆ ಎದ್ದಿತು. ನಾಹಾಸ್ ಪಾಷಾ ಸಾರ್ವಜನಿಕ ಜೀವನವನ್ನು ತ್ಯಜಿಸಿ ಖಾಸಗಿ ಜೀವನದಲ್ಲಿ ಆಸಕ್ತಿ ವಹಿಸಿದ. 1965ರ ಆಗಸ್ಟ್ 25ರಂದು ಈತ ಅಲೆಗ್ಸಾಂಡ್ರಿಯದಲ್ಲಿ ತೀರಿಕೊಂಡ.
(ಎಂ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ